-: ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ನೈತಿಕ ಮೌಲ್ಯಗಳನ್ನೊಳಗೊಂಡ ಹಿತನುಡಿಗಳು :-
- ಮನುಷ್ಯನು ಹರಿಯುವ ನದಿಗೆ ಒಡ್ಡು ಕಟ್ಟಿ ನದಿಯ ಮುಖ ತಿರುಗಿಸಿ ನೀರನ್ನು ತನ್ನ ಹೊಲ-ಗದ್ದೆಗಳಿಗೆ ಬೆಳೆಗಾಗಿ ಉಪಯೋಗಿಸುವಂತೆ ಹಾರಾಡುವ ಮನಸ್ಸನ್ನು ಅಂಕಿತದಲ್ಲಿಟ್ಟುಕೊಂಡು ಅದಕ್ಕೆ ಸನ್ಮಾರ್ಗ ಬೋಧಿಸುವುದು ಅತ್ಯವಶ್ಯ.
- ಯಾವುದೇ ಕಾರ್ಯದಲ್ಲಿ ಪೂರ್ಣ ಮನಸ್ಸನ್ನು ಇಡಬೇಕಾದರೆ ಅದಕ್ಕೆ ಏಕಾಗ್ರತೆ ಮುಖ್ಯ.
- ಸದ್ಯದ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವವರು ಮಾನವ ಜಾತಿಗೆ ಸೇರಿದವರಾಗಿರುವುದಿಲ್ಲ, ಅವರನ್ನು ಯಾರೂ ಪ್ರಾಪಂಚಿಕರೆಂದು ಕರೆಯುವುದಿಲ್ಲ.
- ಬಿಂದುಗಳ ಸಮೂಹ ಒಂದು ‘ಗೆರೆ’ ಹೇಗೋ ಜ್ಞಾನಗಳ ಸಮೂಹ ಒಂದು ‘ಅನುಭವ’.
- ಯಾರು ಬೆಟ್ಟದ ತುತ್ತತುದಿಯನ್ನು ಏರುತ್ತಾರೋ ಅವರು ಬೆಟ್ಟವನ್ನು ಪೂರ್ಣ ಕಂಡವರು, ಯಾರು ತತ್ವವನ್ನು ಅನುಭವಕ್ಕೆ ತಂದುಕೊಂಡಿದ್ದಾರೋ ಅವರು ತತ್ವವನ್ನು ಅರಿತವರು ಅಂದರೆ ‘ತತ್ವಜ್ಞಾನಿ’ಗಳು.
- ಜ್ಞಾನ, ಅನುಷ್ಠಾನ, ಅನುಭವಗಳಿಗಾಗಿ ಯಾರು ಶ್ರಮಿಸುತ್ತಾರೋ ಅವರೇ ಪ್ರಾಮಾಣಿಕರಾದ ‘ಜ್ಞಾನನಿಧಿ’ಗಳು.
- ಅಜ್ಞಾನಿಯೂ ಸಹ ತನ್ನ ಸ್ವರೂಪದ ಅರಿವಿನೊಂದಿಗೆ ಆತ್ಮಸ್ವರೂಪದ ಜ್ಞಾನವನ್ನು ಪಡೆದಾಗ ದಿವ್ಯಶಕ್ತಿ ಸಂಪನ್ನನಾಗುತ್ತಾನೆ.
- ಮನುಷ್ಯನ ಆಂತರಿಕ ಶಕ್ತಿ ಜಾಗೃತವಾದಾಗ ದಿವ್ಯತೆಯ ಬೆಳಕು ಪ್ರತಿಬಿಂಬಿಸುತ್ತದೆ.
- ನಾವು ಕಾರ್ಯಕ್ಕಿಂತಲೂ ಕಾರ್ಯದ ಫಲದ ಮೇಲೆ ತುಂಬಾ ಯೋಚಿಸುತ್ತೇವೆ, ಇದೇ ನಮ್ಮನ್ನು ಚಂಚಲಗೊಳಿಸುವುದು.
- ಮನುಷ್ಯನು ಯಾವ ಆಸೆಯ ಪಾಶಕ್ಕೂ ಒಳಗಾಗದೆ ಸ್ಥಿತ ಪ್ರಜ್ಞನಾಗಿರಬೇಕು.
- ಅನುಭವದ ಬುತ್ತಿಯೇ ನಮ್ಮ ಜೀವನಕ್ಕೆ ದಾರಿದೀಪ.
- ಪ್ರತಿಯೊಬ್ಬ ವ್ಯಕ್ತಿಯೂ ತಾನು ಹುಟ್ಟಿ ಬೆಳೆದ ಮಣ್ಣಿನ ಬಗ್ಗೆ, ದೇಶದ ಬಗ್ಗೆ ಗೌರವ ಹೊಂದಿರಬೇಕು.
- ಜ್ಞಾನವೆಂಬುದು ಬರೀ ಬರಡು, ಅದಕ್ಕೆ ಅನುಭವದ ಆರ್ದೃತೆ ಬೇಕು
- ಎಲ್ಲವೂ ಸರಿಯಾಗಿದ್ದರೆ ತಾನು ಅದನ್ನು ಮಾಡುತ್ತಿದ್ದೆ, ಇದನ್ನು ಮಾಡುತ್ತಿದ್ದೆ ಎಂದು ಹೇಳುವವರು ತೀರಾ ಸಾಮಾನ್ಯರು.
- ‘ಮನಸ್ಸು’ ಅರಗಿನಂತೆ, ಮೇಣದಂತೆ, ನೀರಿನಂತೆ ರೂಪಾಂತರ ಧರಿಸಬಲ್ಲ ವಸ್ತು.
- ಪರಿವರ್ತನೆ ಜಗದ ನಿಯಮ ಇಲ್ಲಿಯ ಪ್ರತಿ ಕ್ಷಣವು ಜಗದ ನಿಯಮಕ್ಕೆ ಒಳಪಟ್ಟಿದೆ, ಅಳಿವಿನಾಚೆಯ ಉಳಿವು ಈ ಜಗದಲ್ಲೆ ನಿರ್ಧರಿಸಲ್ಪಡುವುದು.
- ಬದುಕನ್ನು ನಾವು ರೂಪಿಸಿಕೊಳ್ಳುವುದರ ಮೇಲೆ ಅದರ ಫಲಾಫಲಗಳು ನಿರ್ಧಾರವಾಗಿರುತ್ತದೆ.
- ತ್ಯಾಗದಲ್ಲಿ ಸುಖವಿದೆ, ಭೋಗದಲ್ಲಿ ದುಃಖ-ರೋಗವಿದೆ.
- ಹೊಟ್ಟೆಗೆ ಅನ್ನವಿಲ್ಲದೇ ಸಾಯುವವರ ಸಂಖ್ಯೆಗಿಂತ, ‘ಅನ್ನವಿಲ್ಲದೆ ೀ ಎಲ್ಲಿ ಸತ್ತೇವೋ?’ ಎಂಬ ಹೆದರಿಕೆಯಿಂದ ಸಾಯುತ್ತಿರುವ ಜೀವನ್ಮೃತರ ಸಂಖ್ಯೆಯೇ ಹೆಚ್ಚು.
- ನಾವು ನಮ್ಮ ಪ್ರಯತ್ನದ ಫಲದ ಕಡೆಗೆ ಗಮನ ಕೊಡಬಾರದು, ಕರ್ಮಯೋಗಿಯಾಗಿ ನಮ್ಮ ಮನಸ್ಸಿನ ಶುದ್ಧೀಕರಣಕ್ಕಾಗಿ ಕೆಲಸ ಮಾಡಬೇಕು.
- ಮನುಷ್ಯನು ಪ್ರಪಂಚದಲ್ಲಿ ಯಾವ ದೊಡ್ಡ ಉದ್ದೇಶವನ್ನು ಸಾಧಿಸಬೇಕಾದರೂ ಅವನು ಏಕಾಗ್ರಚಿತ್ತನಾಗಿರಬೇಕು.
- ಮನಸ್ಸನ್ನು ಜಯಿಸಲಾರದವನಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಡಲು ಸಾಧ್ಯವಿಲ್ಲ.